ಒತ್ತಾಯ: ಯಾವನಾದರೊಬ್ಬ ಒಂದು ಒಪ್ಪಂದಕ್ಕೆ ತೊಡಗುವಂತೆ ಮಾಡುವ ಉದ್ದೇಶದಿಂದ, ಯಾವನೇ ಒಬ್ಬ ವ್ಯಕ್ತಿಗೆ ಹಾನಿಯಾಗುವ ರೀತಿಯಲ್ಲಿ, ಭಾರತೀಯ ದಂಡಸಂಹಿತೆಯಲ್ಲಿ (ಇಂಡಿಯನ್ ಪೀನಲ್ ಕೋಡ್) ನಿಷೇಧಿಸಲಾದ ಯಾವುದಾದರೂ ಕೃತ್ಯವನ್ನು ಮಾಡುವುದು ಅಥವಾ ಮಾಡುವುದಾಗಿ ಬೆದರಿಸುವುದು ಅಥವಾ ನ್ಯಾಯಬಾಹಿರವಾಗಿ ಯಾವುದಾದರೂ ಸ್ವತ್ತನ್ನು ನಿಲ್ಲಿಸಿಕೊಳ್ಳುವುದು ಅಥವಾ ನಿಲ್ಲಿಸಿಕೊಳ್ಳುವುದಾಗಿ ಬೆದರಿಸುವುದು-ಎಂದು ಇದನ್ನು (ಕೊಯರ್ಷನ್) ಭಾರತೀಯ ಕರಾರು ಕಾಯಿದೆಯ (ಇಂಡಿಯನ್ ಕಾಂಟ್ರಾಕ್ಟ್‌ ಆಕ್ಟ್‌) 15ನೆಯ ಕಲಂನಲ್ಲಿ ವ್ಯಾಖ್ಯಾನಿಸಲಾಗಿದೆ. ಒಂದು ಒಪ್ಪಂದವನ್ನು ಕರಾರು ಎಂದು ಪರಿಗಣಿಸಬೇಕಾದರೆ ಅದಕ್ಕೆ ಸಂಬಂಧಪಟ್ಟ ಪಕ್ಷಗಳ ನಿರುಪಾಧಿಕ ಸಮ್ಮತಿ (ಖುದ್ದು ರಾಜಿ) ಇರಬೇಕಾದ್ದು ಒಂದು ಷರತ್ತು (ಕಲಂ 10). ಸಮ್ಮತಿಯ ನಿರುಪಾಧಿಕತೆಯನ್ನು ನಷ್ಟಗೊಳಿಸುವ ಕಾರಣಗಳಲ್ಲಿ ಒತ್ತಾಯವೂ ಒಂದು (ಕಲಂ 14).

ಒತ್ತಾಯವನ್ನು ಬಳಸಲಾದ ಸ್ಥಳದಲ್ಲಿ ಭಾರತೀಯ ದಂಡಸಂಹಿತೆ ಜಾರಿಯಲ್ಲಿರುವುದಾಗಲಿ ಇಲ್ಲದಿರುವುದಾಗಲಿ ಗಣನೀಯವಲ್ಲವೆಂದು ಈ ಕಾಯಿದೆಯಲ್ಲಿ ವಿವರಿಸಲಾಗಿದೆ. ಉದಾಹರಣೆ: ಭಾರತೀಯ ದಂಡಸಂಹಿತೆಯ ಪ್ರಕಾರದ ತಕ್ಸೀರಿನ ಬೆದರಿಕೆಯನ್ನು ಸಮುದ್ರದ ಮೇಲೆ ಸಾಗುತ್ತಿರುವ ಹಡಗಿನಲ್ಲಿ ಒಬ್ಬ ಇನ್ನೊಬ್ಬನ ಮೇಲೆ ಪ್ರಯೋಗಿಸಿ, ತನ್ಮೂಲಕ ಆ ಎರಡನೆಯಾತ ಒಪ್ಪಂದಕ್ಕೆ ಬರುವಂತೆ ಮಾಡುತ್ತಾನೆ. ಆದರೆ ಆತ ಒಪ್ಪಂದದಂತೆ ನಡೆಯಲಿಲ್ಲವೆಂದು, ಕರಾರು ಮುರಿದನೆಂದು, ಮೊದಲನೆಯವನು ಆತನ ಮೇಲೆ ಕೋಲ್ಕತ್ತದಲ್ಲಿ ದಾವೆ ಹೂಡುತ್ತಾನೆ. ಇಂಗ್ಲೆಂಡಿನ ನ್ಯಾಯದ ಪ್ರಕಾರ ಮೊದಲನೆಯವನ ಕೃತ್ಯ ಒತ್ತಾಯವಾಗದಿದ್ದರೂ ಭಾರತೀಯ ದಂಡಸಂಹಿತೆಯ ತತ್ಸಂಬಂಧಿ ಕಲಮು (506) ಆ ಕೃತ್ಯ ನಡೆದಾಗ, ನಡೆದಲ್ಲಿ ಜಾರಿಯಲ್ಲಿಲ್ಲದಿದ್ದರೂ ಮೊದಲನೆಯವ ಎರಡನೆಯವನ ಒಪ್ಪಿಗೆ ಪಡೆಯುವ ಸಲುವಾಗಿ ಒತ್ತಾಯ ಮಾಡಿದ್ದಾನೆಂದೇ ಹೇಳಬೇಕು. ಹೀಗೆಂದು ಭಾರತೀಯ ಕರಾರು ಕಾಯಿದೆಯ 15ನೆಯ ಕಲಮಿನಲ್ಲಿ ವಿವರಿಸಲಾಗಿದೆ.

ಭಾರತೀಯ ಕರಾರು ಕಾಯಿದೆಯ 15ನೆಯ ಕಲಮಿನಲ್ಲಿ ಒತ್ತಾಯದ ಬಗ್ಗೆ ಕೊಟ್ಟಿರುವ ವ್ಯಾಖ್ಯೆಯ ವಾಕ್ಯಾಂಗಭಾಗಗಳನ್ನೂ ಅದೇ ಕರಾರಿನ 72ನೆಯ ಕಲಮಿನ ವಿಚಾರಗಳನ್ನೂ ವಿವೇಚಿಸಿದಾಗ ವ್ಯಕ್ತವಾಗುವ ಮುಖ್ಯ ಅಂಶಗಳು ಇವು: 

 1 ಭಾರತೀಯ ದಂಡಸಂಹಿತೆಯಲ್ಲಿ ನಿಷೇಧಿಸಲಾದ ಕೃತ್ಯಗಳನ್ನು ಮಾಡಿಯೋ ಅಥವಾ ಮಾಡುವುದಾಗಿ ಬೆದರಿಸಿಯೋ ಸ್ವತ್ತನ್ನು ಬಿಡದೆಯೋ ಬಿಡುವುದಿಲ್ಲವಾಗಿ ಬೆದರಿಸಿಯೋ ಒಪ್ಪಂದಕ್ಕೆ ಬರುವಂತೆ ಮಾಡಿರಬೇಕು. ಒಪ್ಪಂದವಲ್ಲದೆ ಬೇರೆಯಾವುದಾದರೂ ಉದ್ದೇಶದಿಂದ ಹಾಗೆ ಮಾಡಿದರೆ ಅದು ಒಪ್ಪಂದದ ವಿಚಾರದಲ್ಲಿ ಗಮನಿಸತಕ್ಕ ವಿಷಯವಲ್ಲ.
 2 ಆ ಕೃತ್ಯ ಯಾವನೊಬ್ಬನಿಗೆ ಯಾವ ರೀತಿಯಿಂದಲಾದರೂ ಹಾನಿಕಾರಕವಾಗಿರಬೇಕು. ಭಾವನಾತ್ಮಕ (ಸೆಂಟಿಮೆಂಟಲ್) ಹಾನಿಯನ್ನು ನ್ಯಾಯಾಲಯ ಗಮನಿಸುವುದಿಲ್ಲ. ಹಾನಿ ಕಾನೂನು ಪ್ರಕಾರದ್ದಾಗಿರಬೇಕು. ಒತ್ತಾಯಕ್ಕೊಳಗಾದವನಿಗೆ ಅಥವಾ ಬೇರೆ ಯಾರಿಗಾದರೂ ಅದರಿಂದಾಗಿ ನಷ್ಟ, ತೊಂದರೆ ಅಥವಾ ದೋಷವಾಗಿದ್ದು, ಒತ್ತಾಯ ಪಡಿಸಿದವನಿಗೆ ತನ್ಮೂಲಕ ಅನ್ಯಾಯದ ಲಾಭ ಗಿಟ್ಟಿರಬೇಕು.
 3 ಅದು ಭಾರತೀಯ ದಂಡಸಂಹಿತೆಯಲ್ಲಿ ನಿಷೇಧಿಸಲಾದ ಕೃತ್ಯವಾಗಿದ್ದರೆ ಸಾಕು. ಭಾರತೀಯ ದಂಡಸಂಹಿತೆಯ ಪ್ರಕಾರ ಶಿಕ್ಷಾರ್ಹವಾದ-ಎಂಬುದಕ್ಕಿಂತ ಇದು ವಿಶಾಲವಾಗಿದೆ. ಒಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿ ಅದರ ಕಾರಣದಿಂದ ಬೇರೆಯವರು ಒಪ್ಪಂದಕ್ಕೆ ಬರುವಂತೆ ಮಾಡಿದರೆ ಅಂಥ ಒಪ್ಪಂದ ಒತ್ತಾಯದ ಒಪ್ಪಂದವಾಗುತ್ತದೆ. ಒಂದು ಕ್ರಿಮಿನಲ್ ಮೊಕದ್ದಮೆ ಇರುವಾಗ ಅಥವಾ ಕ್ರಿಮಿನಲ್ ಮೊಕದ್ದಮೆಯ ಹೆದರಿಕೆಯಿಂದ ಒಪ್ಪಂದವಾದ ಪಕ್ಷದಲ್ಲಿ ಅದು ಒತ್ತಾಯದ ಪರಿಧಿಯಲ್ಲಿ ಬರಲಾರದು. ಫಿರ್ಯಾದಿ (ಕಂಪ್ಲೇನೆಂಟ್) ಅಥವಾ ಅವನಿಗಾಗಿ ಮತ್ತೆ ಯಾರಾದರೂ ಆರೋಪಿಂiÀi (ಅಕ್ಯೂಸ್ಡ್‌) ಮನಃಸ್ಥಿತಿಯ ಉಪಯೋಗಪಡೆದುಕೊಂಡು ಆತ ಒಪ್ಪಂದಕ್ಕೆ ಬರುವಂತೆ ಅವನ ಮೇಲೆ ಒತ್ತಡ (ಪ್ರೆಷರ್) ತಂದಿರಬೇಕು. ನ್ಯಾಯಸ್ಥಾನದಲ್ಲಿ ತನಿಖೆಗಾಗಿ ಇರುವ ಕ್ರಿಮಿನಲ್ ಮೊಕದ್ದಮೆಯೊಂದನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದ ಪ್ರಯುಕ್ತ ಒಂದು ಒಪ್ಪಂದ ಉಂಟಾಗಿದ್ದರೆ ಅದು ಒತ್ತಾಯದ ಒಪ್ಪಂದ ಎನಿಸದು.
 4 ದಂಡಸಂಹಿತೆ ನಿಷೇಧಿಸಿದ ಕೃತ್ಯವನ್ನು ಮಾಡಬೇಕೆಂದೇ ಇಲ್ಲ. ಮಾಡುವುದಾಗಿ ಬೆದರಿಸಿದರೂ ಸಾಕು. ಉದಾಹರಣೆಗಾಗಿ-ಒಪ್ಪಂದಕ್ಕೆ ಬರುವ ಬಗ್ಗೆ ಒಬ್ಬ ಇನ್ನೊಬ್ಬನ ಕಾಲು ಕಡಿದು ಹಾಕುವುದಾಗಿ ಹೇಳುತ್ತಾನೆ. ಕಾಲು ಕಡಿದು ಹಾಕದಿದ್ದರೂ ಹಾಕುವ ಬೆದರಿಕೆಯಿಂದ ಒಪ್ಪಂದವಾಗಿದ್ದರೆ ಅದು ಒತ್ತಾಯದ ಒಪ್ಪಂದವಾಗುತ್ತದೆ.
 5 ಯಾವುದಾದರೂ ಸ್ವತ್ತನ್ನು ಬಿಡದೆ ಅಥವಾ ಬಿಡುವುದಿಲ್ಲವಾಗಿ ಹೆದರಿಸಿ, ಯಾವನೊಬ್ಬನಿಗೆ ಹಾನಿ ಬರುವಂತೆ ಮಾಡಿ, ಒಪ್ಪಂದಕ್ಕೆ ಒಪ್ಪಿಸಿದರೆ ಅದು ಒತ್ತಾಯದ ಒಪ್ಪಂದವಾಗುತ್ತದೆ. ಇದರಿಂದ ಒಪ್ಪುವವನ ಮನಸ್ಸಿನ ಮೇಲೆ ಬಲಪ್ರಯೋಗವಾಗುತ್ತದೆ. ಮಗನ ಮೇಲೆ ವಿಧಿಸಲಾದ ಜುಲ್ಮಾನೆಯ ಹಣದ ವಸೂಲಿಯ ಬಗ್ಗೆ ತಂದೆ ಮತ್ತು ಮಕ್ಕಳ ಸಂಯುಕ್ತ ಹಕ್ಕಿನ ಸ್ವತ್ತನ್ನು ಜಫ್ತಿಪಡಿಸಿದ್ದು, ಆ ಸ್ವತ್ತನ್ನು ಮಾರಾಟದಿಂದ ಉಳಿಸಿಕೊಳ್ಳಲು ತಂದೆ ಹಣವನ್ನು ತೆತ್ತ ಪಕ್ಷದಲ್ಲಿ ಅದು ಒತ್ತಾಯದಿಂದ ತೆತ್ತ ಹಣ. ಅನ್ಯಾಯವಾಗಿ ತೆರಿಗೆ ಯನ್ನು ಹೊರಿಸಿದ್ದು, ಆಸ್ತಿಯನ್ನು ಮಾರಾಟ ಮಾಡುವ ಪ್ರಸಂಗವನ್ನು ತಪ್ಪಿಸುವ ಸಲುವಾಗಿ ತೆರಿಗೆಯನ್ನು ಕೊಟ್ಟಲ್ಲಿ ಅದನ್ನು ತಿರುಗಿ ನ್ಯಾಯಾಲಯಗಳ ಮುಖಾಂತರ ಪಡೆಯಬಹುದು. ಆದರೆ ಪ್ರತಿಯೊಂದು ಬೆದರಿಕೆಯೂ ಒತ್ತಾಯವೆನಿಸದು; ಆ ಕಾರಣದಿಂದ ಒಪ್ಪಂದ ಒತ್ತಾಯದ್ದೆಂದು ತಳ್ಳಿಹಾಕಲಾಗುವುದು. ಹೆದರಿಸಿದ ಕಾರ್ಯ ಅನ್ಯಾಯದ್ದಿದ್ದರೆ ಮಾತ್ರ ಅದು ಒತ್ತಾಯವೆನಿಸುತ್ತದೆ. ಆದರೆ ವಿರಳವಾಗಿ ಇದಕ್ಕೆ ಅಪವಾದ (ಎಕ್ಸೆಪ್ಷನ್) ಇಲ್ಲದಿಲ್ಲ. ಉದಾಹರಣೆಗಾಗಿ, ಒಂದು ಕರಾರನ್ನು ಮುರಿಯುವ ಬೆದರಿಕೆ ಸ್ವತಃ ಯಾವ ಒತ್ತಾಯವಾಗ ಲಾರದಾದರೂ ಒಪ್ಪಿಕೊಂಡಂತೆ ನಡೆಯದಿದ್ದರೆ, ತುಂಬಲಾರದ ನಷ್ಟವಾಗುವಂತಿದ್ದರೆ, ಕರಾರಿನ ಮುರಿಯುವಿಕೆಯ ಹೆದರಿಕೆ ಹಾಕುವುದೂ ಒತ್ತಾಯದ ಸ್ವರೂಪ ತಾಳುತ್ತದೆ.

ಒಪ್ಪಂದಕ್ಕೆ ಸೇರಿದವರಲ್ಲಿ ಯಾರಾದರೂ ಅನ್ಯಾಯವಾಗಿ ಹೇರಿದ ಒತ್ತಾಯವನ್ನು ತಡೆಯಲು ಅಸಾಧ್ಯವಾಗುವ ಮಾನಸಿಕ ಅವಸ್ಥೆಯವರಾಗಿದ್ದೆ ಒಪ್ಪಂದಕ್ಕೆ ಅವರ ಅನುಮತಿ ಇಲ್ಲವೆಂದು ತಿಳಿಯಬೇಕು. ಹಾಕಿದ ಬೆದರಿಕೆ, ಸಾಮಾನ್ಯ ಎದೆಗಾರಿಕೆ ಮತ್ತು ದೃಢತೆ ಇರುವ ಮನುಷ್ಯನನ್ನು ಒಪ್ಪುವಂತೆ ಮಾಡುವಷ್ಟು ಪರಿಣಾಮಕಾರಿಯಾಗಿರಬೇಕೆಂದು ನಿಯಮವಿಲ್ಲ.

ಇಂಗ್ಲಿಷ್ ನ್ಯಾಯದಲ್ಲಿ ಒತ್ತಾಯದಿಂದ ಸಂಭವಿಸಿದ ಒಪ್ಪಂದಗಳಿಗೆ ಬಲಾತ್ಕಾರದಿಂದ (ಡ್ಯೂರೆಸ್) ಆದ ಒಪ್ಪಂದಗಳೆಂದು ಹೇಳಲಾಗುತ್ತದೆ. ಭಾರತದ ಒತ್ತಾಯಕ್ಕೂ ಇಂಗ್ಲಿಷ್ ಕಾನೂನಿನ ಬಲಾತ್ಕಾರಕ್ಕೂ ಮುಖ್ಯವಾಗಿ ಎರಡು ವ್ಯತ್ಯಾಸಗಳಿವೆ: 
 1 ಒತ್ತಾಯವನ್ನು ಮನುಷ್ಯನ ಮೇಲಾಗಲಿ ಸ್ವತ್ತಿನ ಮೇಲಾಗಲಿ ಹೇರಬಹುದು. ಮನುಷ್ಯನ ಮೇಲೆ ಮಾಡಲಾದ ಒತ್ತಾಯವನ್ನು ಮಾತ್ರ ಬಲಾತ್ಕಾರ ಗಮನಕ್ಕೆ ತೆಗೆದುಕೊಳ್ಳುತ್ತದೆ.
 2 ಕರಾರಿನ ಪಕ್ಷವಾದ ವ್ಯಕ್ತಿಯಿಂದ ಅಥವಾ ಅವನ ಪ್ರತಿನಿಧಿಯಿಂದ ಅಥವಾ ಆತನ ತಿಳಿವಳಿಕೆ ಮತ್ತು ಒಪ್ಪಿಗೆಯಿಂದ ಕಾರ್ಯಪ್ರವೃತ್ತನಾದವನಿಂದ ಬಲಾತ್ಕಾರ ಸಂಭವಿಸಿರಬೇಕು; ಕರಾರಿನ ಇನ್ನೊಂದು ಪಕ್ಷಕ್ಕೆ ಅಥವಾ ಆತನ ಸತೀಸುತರಿಗೆ ಮಾತ್ರವೇ ಹಾನಿಯೊದಗಿರಬೇಕು ಎಂಬುದಾಗಿ ಭಾರತದ ಕಾಯಿದೆಯಲ್ಲಿ ಹೇಳಿಲ್ಲ. ಈ ದೃಷ್ಟಿಯಲ್ಲಿ ಭಾರತದ ಕಾಯಿದೆ ಹೆಚ್ಚು ವ್ಯಾಪಕವಾದದ್ದು.
ಒತ್ತಾಯದ ಒಪ್ಪಂದಗಳು ಎಂದೂ ಆರಂಭತಃ ಶೂನ್ಯವಾದ (ವಾಯ್ಡ್‌ ಅಬ್ ಇನಿಷಿಯೋ) ಒಪ್ಪಂದಗಳಾಗುವುದಿಲ್ಲ. ಯಾವಾತ ಅನ್ಯಾಯ ಹೊಂದುತ್ತಾನೋ ಅವನಿಗೆ ಕರಾರನ್ನು ಶೂನ್ಯಗೊಳಿಸುವ (ವಾಯ್ಡ್‌ ಬಲ್) ಹಕ್ಕು ಇರುತ್ತದೆ. ಒತ್ತಾಯಕ್ಕೆ ಒಳಗಾದವನು ಅವನ ಇಚ್ಛೆ ಇದ್ದಲ್ಲಿ ನ್ಯಾಯಸ್ಥಾನದಲ್ಲಿ ಒಪ್ಪಂದದಿಂದ ನಿವೃತ್ತಿ ಪಡೆಯಬಹುದು. ಒತ್ತಾಯದಿಂದ ಒಪ್ಪಂದವನ್ನು ತನ್ನ ಅನುಕೂಲಕ್ಕೆ ಪಡೆದವನು ಒಪ್ಪಂದಕ್ಕೆ ಚ್ಯುತಿ ಬಂದರೆ ನಿವೃತ್ತಿ ಪಡೆಯಲಾರ.

ಒತ್ತಾಯದ ಒಪ್ಪಂದವೆಂದು ದೃಢಪಡಿಸುವುದು (ಪ್ರುವ್) ಹಾಗೆಂದು ವಾದ ಹೂಡಿದವನ ಹೊಣೆಗಾರಿಕೆ ಯಾಗುತ್ತದೆ. ಆತ ಒತ್ತಾಯಕ್ಕೆ ಸಂಬಂಧಿಸಿದ ಎಲ್ಲ ಸಂಗತಿಗಳನ್ನೂ ವಿವರಿಸಿ ಹೇಳಬೇಕಲ್ಲದೆ ಅದಕ್ಕೆ ರುಜುವಾತು ದೊರಕಿಸಿಕೊಡಬೇಕು. ಆದ್ದರಿಂದ ಒತ್ತಾಯಕ್ಕೆ ಸಂಬಂಧಪಟ್ಟ ಮೊಕದ್ದಮೆಗಳಲ್ಲಿ ತೀರ್ಪು ಆಯಾಯಾ ಮೊಕದ್ದಮೆಗಳ ವಿಶಿಷ್ಟ ಸಂಗತಿಗೆ ಅನುಗುಣವಾಗಿರುತ್ತದೆ. ಒತ್ತಾಯವನ್ನು ರುಜುವಾತು ಮಾಡಬೇಕಾದಲ್ಲಿ ಖಚಿತವಾದ ಪುರಾವೆ ಇರಬೇಕು.

ಒಂದು ಒಪ್ಪಂದ ಒತ್ತಾಯವನ್ನು ಹೇರಿದ್ದರ ಪರಿಣಾಮವೇ ಅಲ್ಲವೇ ಎಂಬ ವಿಚಾರ ಕಾನೂನು ಮತ್ತು ವಸ್ತುಸ್ಥಿತಿಗಳ ಸಮ್ಮಿಶ್ರ ಪ್ರಶ್ನೆ. ಒತ್ತಾಯದ ವ್ಯಾಖ್ಯೆಯಲ್ಲಿ ಹೇಳಿದ ಭಾಗಗಳು ಅಥವಾ ಅಂಶಗಳು ಇವೆಯೆ ಎಂಬುದು ವಸ್ತುಸ್ಥಿತಿಯ ಪ್ರಶ್ನೆ. ಹೇಳಿದ ಮತ್ತು ರುಜುವಾತು ಪಡೆದ ವಿಚಾರಗಳು ಒತ್ತಾಯವನ್ನು ದೃಢಿಕರಿಸುವುವೋ ಎಂಬುದು ಕಾನೂನಿನ ಪ್ರಶ್ನೆ. ಒತ್ತಾಯದ ವಿಚಾರ ಕುರಿತ ತೀರ್ಪು ನೀಡುವಾಗ ನ್ಯಾಯಾಲಯ ಇವೆರಡನ್ನೂ ಗಮನಿಸುತ್ತದೆ.                     (ಕೆ.ಜಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ